top of page

ಜೇಡಗಳನ್ನು ಪ್ರೀತಿಸುವ ಮಕ್ಕಳು

  • Feb 9
  • 2 min read

Updated: 4 days ago

-by Gousia Taj

An Educator's Diary#8


ಮ್ಯಾಮ್, ನಾವು ಸಿಗ್ನೇಚರ್ ಜೇಡ ನೋಡಿದ್ದೇವೆ

19/12/25 ರಂದು ತರಬನಹಳ್ಳಿಯ 4ನೇ ಮತ್ತು 5ನೇ ತರಗತಿಯ ಮಕ್ಕಳಿಗೆ ಜೀವಿಗಳ ಮನೆಗಳ ಬಗ್ಗೆ ಕಾರ್ಯಾಗಾರ ನಡೆದಿತ್ತು.

ಅದರಲ್ಲೊಂದು ಜೇಡಗಳ ಬಗ್ಗೆ ಬಿಂಗೊ ಆಟವಿತ್ತು. ಬಿಂಗೊ ಶೀಟಿನಲ್ಲಿ ಬೇರೆ ಬೇರೆ ರೀತಿಯ ಜೇಡಗಳ ಚಿತ್ರಗಳಿದ್ದವು. ಮಕ್ಕಳಿಗೆ “ಸಿಗ್ನೇಚರ್ ಜೇಡ” ಬಿಟ್ಟು ಇನ್ನೆಲ್ಲಾ ಜೇಡಗಳು ಸಿಕ್ಕಿದ್ದವು. ಆದರೆ ಮಕ್ಕಳು ಸಿಗ್ನೇಚರ್ ಜೇಡವೂ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಳ್ಳುತ್ತಿದ್ದರು. ಆಗ ನಾವು ಅವರವರ ಬಿಂಗೊ ಶೀಟುಗಳನ್ನು ಅವರವರಿಗೆ ಮನೆಗೆ ತೆಗೆದುಕೊಂಡು ಹೋಗಲು ಕೊಟ್ಟೆವು. ಹಾಗೂ “ಇಲ್ಲಿ ಸಿಗ್ನೇಚರ್ ಜೇಡ ಸಿಗಲಿಲ್ಲ. ಪರವಾಗಿಲ್ಲ, ನಿಮ್ಮ ಮನೆಯ ಹತ್ತಿರವೋ, ದಾರಿಯಲ್ಲೊ, ಅಥವಾ ಶಾಲೆಯಲ್ಲೊ ನೋಡಿರಿ” ಎಂದು ಹೇಳಿದ್ದೆವು.


ಸುಮಾರು ಎರಡು ವಾರಗಳ ನಂತರ, ಎಂದಿನಂತೆ ಮಕ್ಕಳಿಗೆ ಪಾಠಕ್ಕೆಂದು ಕರೆಯಲು ನಾನು ತರಗತಿಗೆ ಕಾಲಿಟ್ಟಿದ್ದೇ ತಡ, ಮಕ್ಕಳು “ಮ್ಯಾಮ್, ನಾವು ಸಿಗ್ನೇಚರ್ ಜೇಡ ನೋಡಿದ್ದೇವೆ!” ಎಂದು ಜೋರಾಗಿ ಕಿರುಚಿದರು. ನನಗೆ ಒಂದೇ ಸರಿ ಭಯವಾಯಿತು. ಏಕೆಂದರೆ ಮಕ್ಕಳು ಯಾವಾಗಲೂ ನನ್ನನ್ನು ಗುಡ್ ಮಾರ್ನಿಂಗ್ ಮ್ಯಾಮ್ ಎಂದು ಹೇಳುವವವರು ಆ ದಿನ ನಾವು ಸಿಗ್ನೇಚರ್ ಜೇಡ ನೋಡಿದೆವೆಂಬ ಧ್ವನಿ ಕೇಳಿ ನಾನು ಬೆಚ್ಚಿ ಬಿದ್ದೆ. 


A Signature Spider from Tarabanahalli School Campus
A Signature Spider from Tarabanahalli School Campus

ಆಗ "ಎಲ್ಲಿ ನೋಡಿದ್ರಿ?" ಎಂದು ಕೇಳಿದೆ. ಮಕ್ಕಳು “ನಮ್ಮ ಶಾಲೆಯ ಶೌಚಾಲಯದ ಮುಂದೆ ಹುಲ್ಲಿನಲ್ಲಿ ಕಟ್ಟಿದೆ ಮ್ಯಾಮ್, ಬನ್ನಿ ತೋರಿಸುತ್ತೇವೆ” ಎಂದು ನನ್ನ ಕೈ ಹಿಡಿದು ಎಳೆದುಕೊಂಡು ಹೋಗಿ ತೋರಿಸಿದರು. ಅಲ್ಲಿ ಹೋಗಿ ನೋಡಿದರೆ ಮೂರು ಸ್ಥಳಗಳಲ್ಲಿ ಸಿಗ್ನೇಚರ್ ಜೇಡಗಳಿದ್ದವು.


ಆಗ ನಾನು “ಹೌದು ಮಕ್ಕಳೆ, ಇದೇ ನಿಮ್ಮ ಬಿಂಗೊದಲ್ಲಿದ್ದ ಸಿಗ್ನೇಚರ್ ಜೇಡ, ಇದು ಮಿಸ್ ಆಗಿತ್ತಲ್ಲ ಈಗ ಟಿಕ್ ಹಾಕಿಕೊಳ್ಳಿ” ಎಂದೆ.


ನಾನು ಮಕ್ಕಳ ಮುಖದಲ್ಲಿ ಜೇಡದ ಬಗ್ಗೆ ತುಂಬಾ ಖುಷಿಯನ್ನು ನೋಡಿದೆ. ಅವರು ನಿಧಿ ಸಿಕ್ಕಿದಂತೆ ಸಂತೋಷ ಪಡುತ್ತಿದ್ದರು. ಈ ಉತ್ಸಾಹವನ್ನು ನೋಡಿ ನನಗೂ ತುಂಬ ಖುಷಿಯಾಯಿತು. ಕಾರ್ಯಾಗಾರ ಮಕ್ಕಳ ಮನಸ್ಸಿಗೆ ಎಷ್ಟು ಪರಿಣಾಮ ಬೀರಿದೆ ಎಂದುಕೊಂಡೆ.


ಅದೇ ದಿನ ನಂತರ ಪಾಠದ ಅಂತ್ಯದಲ್ಲಿ ಕೀಟಗಳ ಪ್ರದರ್ಶನಕ್ಕೆಂದು ಟೇಬಲ್ ಸೆಟ್ ಮಾಡುತ್ತಿದ್ದೆವು. ಆಗ ಮೂಲೆಯಲ್ಲಿ ಒಂದು ದೊಡ್ಡಪ್ಪ ಜೇಡ ಬಲೆ ಕಟ್ಟಿತ್ತು. ಅದು ಕೈಗಳಿಗೆ ಅಂಟುತ್ತಿತ್ತು. ನಾನು ಪೊರಕೆ ತಂದು ಇದನ್ನು ಸ್ವಚ್ಛ ಮಾಡೋಣ ಎಂದೆ. ಆದರೆ ಮಾಳಪ್ಪ ಎಂಬ ವಿದ್ಯಾರ್ಥಿ “ ಬೇಡ ಮ್ಯಾಮ್, ಪಾಪ ಇದೂ ಇಲ್ಲೇ ಇರಲಿ” ಎಂದು ಹೇಳಿ ಅದನ್ನು ಹಾಗೇ ಬಿಟ್ಟು ಬಿಟ್ಟ. ಇದನ್ನು ಕೇಳಿ ಹಾಗೂ ನೋಡಿ ನನಗೆ ತುಂಬಾ ಹೆಮ್ಮೆ ಎನಿಸಿತು. ಜೊತೆಗೆ ನಾನು ಬಲೆ ತೆಗಿಯಿರಿ ಎಂದು ಹೇಳಬಾರದಿತ್ತೇನೋ ಎಂದು ಅನಿಸಿತು. 


Children observing an ant carrying a dead insect.
Children observing an ant carrying a dead insect.

ಒಟ್ಟಿನಲ್ಲಿ ಈಗ ಮಕ್ಕಳಲ್ಲಿ ಜೇಡಗಳನ್ನು ಗಮನಿಸುವ ಆಸಕ್ತಿ ಹೆಚ್ಚಾಗಿದೆ. ನಾನು ಪ್ರತಿ ಸಲಿ ಪಾಠಕ್ಕೆಂದು ಹೋದಾಗ ಮಕ್ಕಳು ಮೊದಲು ಅವರ ಮತ್ತು ಯಾವುದೇ ಪ್ರಾಣಿ-ಪಕ್ಷಿಗಳು, ಕೀಟಗಳು, ಮತ್ತು ಮರಗಳ ಜೊತೆ ನಡೆದ  ಸಂಗತಿಗಳನ್ನು ಹಂಚಿಕೊಂಡ ನಂತರವೇ ಪಾಠ ಶುರುವಾಗುತ್ತದೆ.


Spider made out of natural materials by the students
Spider made out of natural materials by the students

Image credits- Priyanka Prakash, Aditi Rao

Written by : Gousia Taj- Facilitator at the Fig Tree Learning Centre (FTLC).

If you are an educator looking to engage with articles and opinion pieces on nature education and pedagogy, a student looking to explore discourses in nature education, or just curious about these things - here's a curated list of essential readings available online.



 
 
 

​Nature Classrooms, Flat No.1, First Floor, #339, 1st Cross Rd, Canara Bank Layout, Rajiv Gandhi Nagar, Kodigehalli, Bengaluru, Karnataka - 560097, India

A Programme in Collaboration with Youth Conservation Action Network (YouCAN)

Contact Us: info[at]natureclassrooms[dot]in

Designed and maintained by Mayank Anand

bottom of page